ನಿವೇದನೆ
ಕವಿ: ಡಿ.ವಿ.ಜಿ. 
ವನಸುಮದೊಳೆನ್ನ ಜೀವನವು ವಿಕಸಿಸುವಂತೆ 
ಮನವನನುಗೊಳಿಸು ಗುರುವೇ 
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ||ವನಸುಮದೊಳೆನ್ನ ಜೀವನವು ---

ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ 
ಸೌರಭವ ಸೂಸಿ ನಲವಿಂ 
ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತ ಕೃತ್ಯತೆಯ ಪಡೆವಂತೆ ||ವನಸುಮದೊಳೆನ್ನ ಜೀವನವು ---

ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ 
ವಿಪರೀತ ಮತಿಯನಳಿದೂ
ವಿಪುಲಾಶ್ರಯವನೀವ ಸುಫಲ ಸುಮಭರಿತ 
ಪಾದಪದಂತೆ ನೈಜಮಾ ದೊಳ್ಪಿನಲಿ ಬಾಳ್ವವೊಲು||ವನಸುಮದೊಳೆನ್ನ ಜೀವನವು --- ನಿವೇದನ ಕವನಸಂಗ್ರಹ- ಡಿ.ವಿ.ಜಿ http://chitra-durga.blogspot.com/2008/05/blog-post.html chitradurga blogspot DVG ;Remembering the legacy

ನೋಡಿ
ಬಯಕೆ -(ಇಂಗ್ಲಿಷ್ ಕವನದ ಅನುವಾದ)
ಪ್ರಿಯತಮೆಗೆ
ನಿವೇದನ ಡಿ.ವಿ.ಜಿ.

ಪರಿವಿಡಿ

ಉಲ್ಲೇಖ
ವರ್ಗ:ಕನ್ನಡ ಸಾಹಿತ್ಯ